ಆಪ್ಟೆರಿಗೋಟಾ
ಕೀಟ ವರ್ಗದ ಕೆಳದರ್ಜೆಯ ಎರಡು ಉಪ ವರ್ಗಗಳಲ್ಲಿ ಒಂದು; ಇನ್ನೊಂದರ ಹೆಸರು ಪ್ಟೆರಿಗೋಟಾ. ಆಪ್ಟೆರಿಗೋಟಾಗಳಿಗೆ ರೆಕ್ಕೆಗಳಿಲ್ಲ (ನಪಕ್ಷೀಯಗಳು), ಪ್ಟೆರಿಗೋಟಾಗಳು ಪಕ್ಷೀಯಗಳು. ಆಪ್ಟೆರಿಗೋಟಾ ಪದ ಆಪ್ಟೀರಾ (ನೆಲದ ಮೇಲಿನ ಹಲವಾರು ನಪಕ್ಷೀಯ ಸಂಧಿಪದಗಳನ್ನು ಕುರಿತು ಬಲುಹಿಂದೆ ಬಳಸುತ್ತಿದ್ದ ಪದ) ಪದದಿಂದ ಭಿನ್ನವಾಗಿದೆ. ಆಪ್ಟೆರಿಗೋಟಾಗಳು ಪ್ರಪಂಚದಲ್ಲೆಲ್ಲ ಹರಡಿವೆ. ಶರೀರ ರಚನೆ ಎಲ್ಲಕ್ಕೂ ಒಂದೇ ತೆರನಾಗಿದೆ.

	ಆಪ್ಟೆರಿಗೋಟಾ ಕೀಟಗಳನ್ನು ನಾಲ್ಕು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು. ಪ್ರೊಟೂರ, ಕೊಲೆಂಬೊಲ, ಥೈಸನೂರ, ಡೈಪ್ಲೂರ.

	ಪ್ರೊಟೂರ: ಗಾತ್ರ ಸಣ್ಣ. ಬಣ್ಣ ಹಳದಿ, ಬೂದು. ಕುಡಿ ಮೀಸೆಗಳಿಲ್ಲ. ಬಾಯಿ ತಲೆಯೊಳಗೆ ಅಡಗಿದೆ. 12 ಖಂಡಗಳು. ಉದರದಲ್ಲಿವೆ. ಉಪಾಂಗಗಳು ಮೊದಲನೆಯ 3 ಖಂಡಗಳಲ್ಲಿ ಮಾತ್ರ ಇವೆ. ವಾಸ ಸಾಮಾನ್ಯವಾಗಿ ಕಾಡಿನ ಕೊಳಕು ವಸ್ತುಗಳ ಕೆಳಗಿನ ಮಣ್ಣಿನಲ್ಲಿ. ಕೆಲವು ವೇಳೆ ತೊಗಟೆ ಕೆಳಗೆ ಅಸಂಖ್ಯಾತವಾಗಿರುತ್ತವೆ. ಪ್ರಾಯದ ಕೀಟದ ಉದರದಲ್ಲಿ 12 ಖಂಡಗಳಿವೆ. ಕೊನೆಯ 3 ಖಂಡಗಳ ಬೆಳೆವಣಿಗೆ ಕೀಟ ಮೊಟ್ಟೆಯಿಂದ ಹೊರಬಂದ ಮೇಲೆ ಆಗುವುದು. ಅವು ಉದ್ದದಲ್ಲಿ ಇತರ ಖಂಡಗಳಿಗಿಂತ ಚಿಕ್ಕವು.

	ಕೊಲೆಂಬೊಲ: ಕುಡಿ ಮೀಸೆ, ಜಿಗಿಬಾಲ (ಉದ್ದ 1-5 ಮಿ.ಮೀ.) ಇವೆ. ವಾಸ ಕೊಳೆಯುತ್ತಿರುವ ಸಸ್ಯಗಳೆಡೆ, ತೊಗಟೆಗಳ ಹಿಂದೆ ಇರುವೆ ಗೂಡುಗಳಲ್ಲಿ ಇತ್ಯಾದಿ. ಬಾಯಿ ತಲೆಯೊಳಗೆ ಅಡಗಿದೆ. ಉದರದಲ್ಲಿ 6 ಖಂಡಗಳಿವೆ. ಮೊದಲನೆಯ ಖಂಡದ ಮೇಲೆ ಮಧ್ಯದ ಉಪಾಂಗಗಳಿವೆ. 3ನೆಯ ಖಂಡದ ಮೇಲೆ ಮಾರ್ಪಟ್ಟ ಚಿಕ್ಕ ಉಪಾಂಗಗಳೂ ಇವೆ. ಉಸಿರಾಡಲು ಶ್ವಾಸನಾಳಗಳಿವೆ. ಕೀಟಗಳು ಮಿಶ್ರಾಹಾರಿ. ಬಣ್ಣ ಕಪ್ಪು, ಬೂದು, ನೀಲಿ. ಹೆಣ್ಣು ಗಂಡುಗಳಲ್ಲಿ ವ್ಯತ್ಯಾಸ ಕಾಣುವುದಿಲ್ಲ.

	ಥೈಸನೂರ : ಕೊಳೆತ ಎಲೆ, ತೊಗಟೆಗಳ ಕಲ್ಲುಗಳ ಕೆಳಗೆ, ಮಣ್ಣಿನಲ್ಲಿ, ಇರುವೆ, ಗೆದ್ದಲ ಗೂಡುಗಳಲ್ಲಿ ವಾಸ, ಕುಡಿಮೀಸೆ, ಉದರದಲ್ಲಿ 10-11 ಖಂಡಗಳು. ಕೆಳಗಡೆಯ ಉಪಾಂಗಗಳು ಜೊತೆಯಾಗಿವೆ. ಉದರದ ತುದಿಯಲ್ಲಿ ಬಿರುಗೂದಲು (ಬ್ರಿಸಲ್ ಟೈಲ್ಸ್) ಇವೆ. ಶ್ವಾಸನಾಳ ಇದೆ, ಎದೆಯ ಪಕ್ಕದಲ್ಲಿ ನಾಲ್ಕು ಜೊತೆ ಶ್ವಾಸರಂಧ್ರಗಳಿವೆ. ಕೊಳೆತ ಸಸ್ಯ, ಪುಸ್ತಕಗಳಿಗೆ ಲೇಪಿಸಿದ ಗಂಜಿ ತಿನ್ನುತ್ತದೆ. ಕೆಲವು ಮಾಂಸಹಾರಿ ಕೀಟಗಳೂ ಉಂಟು. 

	ಡೈಪ್ಲೂರ : ಹಲವಾರು ಖಂಡಗಳಿಂದ ಕೂಡಿದ ಕುಡಿಮೀಸೆಗಳಿವೆ. ಬಾಯಿಯ ಒಂದು ಭಾಗ ತಲೆಯೊಳಗೆ ಹುದುಗಿದೆ. ಕುರುಡು. 11 ಖಂಡಗಳಿರುವ ಉದರ. ಇದರ ಕೊನೆಗೆ ಖಂಡಗಳಿಂದ ಕೂಡಿದ ಚಿಮಟದಂಥ ಎರಡು ಉದ್ದದ ರಚನೆಗಳು. 
												
(ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ